ಇಂಹೊಟೆಪ್ -
	ಕ್ರಿಸ್ತಪೂರ್ವ ಸುಮಾರು 2980ರಲ್ಲಿ ಈಜಿಪ್ಟಿನ ಮೂರನೆಯ ರಾಜಸಂತತಿಯ ಸೋಸರ್ ದೊರೆಯ ಕಾಲದಲ್ಲಿದ್ದ ಪ್ರಖ್ಯಾತ ವಿದ್ವಾಂಸ ಮತ್ತು ವೈದ್ಯ. ಸೋಸರನ ಆಸ್ಥಾನದಲ್ಲಿ ಈತ ಪುರೋಹಿತ, ಮುಖ್ಯಮಂತ್ರಿ, ವಾಸ್ತುಶಿಲ್ಪಿ, ಲಿಪಿಕಾರ ಮತ್ತು ವೈದ್ಯನಾಗಿ ತುಂಬ ಮನ್ನಣೆ ಪಡೆದಿದ್ದ. ಆ ದೊರೆಯ ಮೆಟ್ಟಿಲು ಪಿರಮಿಡ್ಡನ್ನು ಕಟ್ಟಿಸಿದವ ಈತನೇ ಎಂದು ಹೇಳುತ್ತಾರೆ. ಇವನ ವಿದ್ಯಾಪ್ರೌಢಿಮೆ, ವೈದ್ಯಜ್ಞಾನ ಮತ್ತು ಮಾಟವಿದ್ಯೆಗಳನ್ನು ಕಂಡು ಜನ ವಿಸ್ಮಯಗೊಂಡರು; ಕೊನೆಗೆ ಈತ ದೈವಾಂಶಸಂಭೂತನೆಂದೂ ಮೆಂಫಿಸ್‍ನ ತ್ರಿಮೂರ್ತಿಗಳಲ್ಲೊಬ್ಬನಾದ ಪ್ಟಾ ಎಂಬ ದೇವನ ಮಗನೆಂದೂ ಪರಿಗಣಿಸಿದರು. ಮೊದಲು ಇವನಿಗೆ ಉಪದೇವತೆಗಳ (ಡೆಮಿಗಡ್ಸ್) ಪಟ್ಟವನ್ನು ಕೊಟ್ಟಿದ್ದರು; ಮುಂದೆ ಟಾಲಮಿ ದೊರೆಗಳ ಕಾಲದಲ್ಲಿ ಈತ ದೇವನೆಂದೇ ಭಾವಿಸಲಾಯಿತು. ಇವನಿಗಾಗಿ ಮಂದಿರಗಳು ನಿರ್ಮಿತವಾದುವು; ಆ ಮಂದಿರಗಳು ದೇವಕೃಪಾರ್ಥಿಗಳಾದ ರೋಗಿಗಳ ಯಾತ್ರಾಸ್ಥಳಗಳಾದವು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ